home udupi kanakadasa RGP centre committee committee publications news gallery

Historical Background

Photo Gallary
Desi Utsav 2011
Assam Tour
Annual Day
Yakshagana Step
News

Award Kushi and Polali

ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ

ಎಂಜಿಎಂ ಕಾಲೇಜಿನ ಅಂಗಸಂಸ್ಥೆಯಾದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಸ್ಥಾಪಿತಗೊಂಡ ದತ್ತಿ ನಿಧಿಯ ವತಿಯಿಂದ ಕೊಡಲ್ಪಡುವ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿಗಳನ್ನು ಡಾ. ಕೊಯಿರಾ ಎನ್. ಬಾಳೆಪುಣಿ, ಡಾ. ವಾಮನ ನಂದಾವರ. ಡಾ. ಸುರೇಂದ್ರ ರಾವ್ ಈ ಮೂವರು ವಿದ್ವಾಂಸರಿಗೆ ಘೋಷಣೆ ಮಾಡಲಾಗಿದ್ದು ಪ್ರಶಸ್ತಿಗಳನ್ನು ೨೦೧೧ ಅಗೋಸ್ತು ೧೯, ೨೦ರಂದು ನಡೆಯುವ ಹಳೆಗನ್ನಡ ಕಾವ್ಯ ರಸಾಸ್ವಾದನ ಶಿಬಿರದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.

ಕು.ಶಿ ಜಾನಪದ ಪ್ರಶಸ್ತಿ

ಎಂಜಿಎಂ ಕಾಲೇಜಿನ ಅಂಗಸಂಸ್ಥೆಯಾದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಸ್ಥಾಪಿತಗೊಂಡ ದತ್ತಿ ನಿಧಿಯ ವತಿಯಿಂದ ಕೊಡಲ್ಪಡುವ ಕು.ಶಿ ಜಾನಪದ ಪ್ರಶಸಿಯನ್ನು ಕ್ರಮವಾಗಿ ಡಾ. ಎಂ. ಪ್ರಭಾಕರ ಜೋಶಿ, ಶ್ರೀ ಚಿದಂಬರ ರಾವ್ ಜಂಬೆ,  ಡಾ. ಎನ್. ಆರ್. ನಾಯಕ್, ಶ್ರೀ ಕೊರಗ ಪಾಣಾರ , ಶ್ರೀ ಕಾಂತು ಪಾಣಾರ ಮುಂತಾದ ವಿದ್ವಾಂಸರಿಗೆ ಘೋಷಣೆ ಮಾಡಲಾಗಿದ್ದು ಪ್ರಶಸ್ತಿಗಳನ್ನು ೨೦೧೧ ಅಗೋಸ್ತು ೧೯ ಹಾಗೂ ೨೦ರಂದು ನಡೆಯುವ ಹಳೆಗನ್ನಡ ಕಾವ್ಯ ರಸಾಸ್ವಾದನ ಶಿಬಿರದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.

Photos

Top

Bhjana kammata

ಭಜನಾ ತರಬೇತಿ ಶಿಬಿರ
ಅಗೋಸ್ತು ೬/೭, ೨೦೧೧
ಪ್ರೊ. ಎಚ್. ಕೃಷ್ಣ ಭಟ್ಟ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕನಕ ಅಧ್ಯಯನ ಮತ್ತು ಸಂಶೋಧನ ಪೀಠ ಎಂಜಿಎಂ ಕಾಲೇಜು ಉಡುಪಿ ಇವರು ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿಯ ಉಡುಪಿ ಶಾಖೆಯ ಸಹಭಾಗಿತ್ವದಲ್ಲಿ ೨೦೧೧ನೇ ಅಗೋಸ್ತು ೬ ಶನಿವಾರ ಹಾಗೂ ೭, ಆದಿತ್ಯವಾರ ಅಂಬಲಪಾಡಿಯ ಶ್ರೀ ಜನಾರ್ದನ ಸ್ವಾಮಿ ಹಾಗೂ ಮಹಾಕಾಳಿ ದೇವಾಲಯದ ಶ್ರೀ ಭವಾನಿಮಂಟಪದಲ್ಲಿ ಕನಕ ಭಜನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಉಡುಪಿ  ಹಾಗೂ ಆಸುಪಾಸುಗಳಲ್ಲಿ ಸುಮಾರು ೬೦೦ ರಷ್ಟು ಭಜನಾ ತಂಡಗಳಿದ್ದು ಅವುಗಳ ಪೈಕಿ ಸುಮಾರು ೨೫ ತಂಡಗಳ ಇಬ್ಬಿಬ್ಬರು ಸದಸ್ಯರನ್ನು ಈ ಶಿಬಿರದಲ್ಲಿ ಭಾಗವಹಿಸುವಂತೆ  ಕೇಳಿಕೊಳ್ಳಲಾಗಿತ್ತು. ಕನಕದಾಸರ ಕೀರ್ತನೆಗಳನ್ನು ಭಜನಾ ಸಂದರ್ಭದಲ್ಲಿ ಹೇಗೆ ಹಾಡಬೇಕು, ಆರಂಭ ಹಾಗೂ ಮುಕ್ತಾಯಗಳನ್ನು ತಿಳಿಯಹೇಳುವುದಲ್ಲದೆ, ಕನಕರ ಕೀರ್ತನೆಗಳಲ್ಲಿ ಕೆಲವೊಂದು ಕ್ಲಿಷ್ಟಕರವಾದ ಅಂಶಗಳಿರುವುದರಿಂದ ಅದರ ಅರ್ಥವನ್ನು ಕೂಡಾ ವಿವರಿಸಿ ಹೇಳಿದರೆ ಕೀರ್ತನೆಯನ್ನು ಹಾಡುವಾಗ ಭಾವಪೂರ್ಣವಾಗಿ ಅನುಭವಿಸಿ ಹಾಡಿದರೆ ನೋಡುವವರಿಗೂ ಕೇಳುಗರಿಗೂ ಹೆಚ್ಚು ಪರಿಣಾಮಕಾರಿಯಾಗಬಹುದೆಂಬುದು ನಮ್ಮ ಉದ್ದೇಶ. ಸುಮಾರು ೭೦ ಮಂದಿ ಹೆಂಗುಸರು ಹಾಗೂ ಗಂಡುಸರು ಪಾಲ್ಗೊಂಡು ಇದರ ಸದುಪಯೋಗವನ್ನು  ಪಡಕೊಂಡರು.

ಅಗೋಸ್ತು ೬, ಶನಿವಾರ ಪೂರ್ವಾಹ್ಣ ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಿದ  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾನ್ಯ ಶ್ರೀ ಅಂಬಾತನಯ ಮುದ್ರಾಡಿಯವರು ಮಾತನಾಡಿ ಪ್ರಾಣಿ ಜಗತ್ತಿನಲ್ಲಿರುವ ಮನುಷ್ಯಪ್ರಾಣಿ ಮಾತ್ರ ಮಾತನಾಡಲು, ಚಿಂತಿಸಲು ಸಮರ್ಥನು. ಅಲ್ಲದೆ, ಚತುರ್ವಿಧ ಪುರುಷಾರ್ಥಗಳ  ಬಗೆಗೆ ಸದಾ ಆಸಕ್ತನಾಗಿದ್ದು ತುರೀಯವಾದ ಮೋಕ್ಷಾಪೇಕ್ಷಿಯು. ಅವನ ಸತತ ಚಿಂತನೆಯೇ ಎತ್ತರಕ್ಕೇರಿಸುವುದು. ಇದು ಓದು, ಅಧ್ಯಯನ,  ಅಭ್ಯಾಸಗಳಿಂದ ಸಾಧ್ಯ. ಆದರೂ ಅವನ ಪ್ರಯತ್ನವನ್ನು ದೈವವು ಒಪ್ಪಿ ಅನುಗ್ರಹಿಸಿದಲ್ಲಿ ಮಾತ್ರ ಮೋಕ್ಷವನ್ನು ಪಡೆಯುವುದು ಸಾಧ್ಯ.  ಮೋಕ್ಷವನ್ನು ಪಡೆಯುವುದಕ್ಕೆ ಸುಲಭ ಮಾರ್ಗವೇ ನಿರಂತರ ಪರಮಾತ್ಮನಲ್ಲಿ ಭಕ್ತಿ ಹಾಗೂ ಅವನ ಹೆಸರನ್ನು ಸ್ಮರಿಸುವುದು. ಅದನ್ನೆ ಭಜನೆ/ಕೀರ್ತನೆ ಎನ್ನುತ್ತಾರೆ ಹಲವು ಮಂದಿ ಸೇರಿ ಭಜನೆ ನಡೆಸಿದರೆ ಅದನ್ನೆ ಸಂಕೀರ್ತನೆ ಎನ್ನುತ್ತಾರೆ. ಕೀರ್ತನೆಯಾಗಲಿ, ಸಂಕೀರ್ತನೆಯಾಗಲಿ ಅರ್ಥ ತಿಳಿದು ಪ್ರವರ್ತಿಸಿದಲ್ಲಿ ಹರಿಯು ಸುಲಭಗಮ್ಯನು. ಚೆನ್ನಾಗಿ ಭಾವಪೂರ್ಣವಾಗಿ ಹಾಡಲೂ, ಅರ್ಥ ತಿಳಿದು ಅನುಷ್ಠಾನಿಸಲೂ ಅನುಕೂಲವಾಗುವಂತೆ ಈ ಶಿಬಿರದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಭಾಗವಹಿಸಿದ ನೀವು ಸಕಲವನ್ನು  ಕರಗತಮಾಡಿಕೊಂಡು ಶಿಬಿರವನ್ನು ಸಾರ್ಥಕಗೊಳಿಸಿರಿ’ ಎಂದು ನುಡಿದರು.

ಧರ್ಮದರ್ಶಿ ಡಾ. ನಿ.ಬಿ ವಿಜಯ ಬಲ್ಲಾಳರು ಶಿಬಿರಕ್ಕೆ ಶುಭವನ್ನು ಹಾರೈಸಿದರು ಮತ್ತು ಇದೀಗ ಜಗತ್ತಿನಲ್ಲಿ ಬಹುಮಂದಿ ಬಯಸುವ ಶಾಂತಿ, ಸಮೃದ್ಧಿಗೆ ಆತ್ಮಸಂಸ್ಕಾರ ಮಾತ್ರ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ಸಂಕೀರ್ತನೆಗಳು ಭಜನೆಗಳು ಬಹು ಪರಿಣಾಮಕಾರಿ ಎಂದರು.

ಶಿಬಿರಾರ್ಥಿಗಳಿಗೆ ಈ ಸಂದರ್ಭದ ಉಪಯೋಗಕ್ಕಾಗಿ ಪಂಡರಾಪುರದಿಂದ ತರಿಸಿದ ಒಂದೊಂದು ಜತೆ ತಾಳಗಳನ್ನು ಪ್ರಸಾದ ರೂಪವಾಗಿ ಎಲ್ಲರಿಗೂ ನೀಡಿ ಹರಸಿದರು.

:೨:

ಶಿಬಿರದ ಆರಂಭದ ದಿನ ಚಂದ್ರಶೇಖರ ಕೆದ್ಲಾಯರು ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರಾರ್ಥಿಗಳಿಗೆ ಕನಕದಾಸರ ಸುಮಾರು ಹತ್ತು ಕೀರ್ತನೆಗಳನ್ನು ಹಾಡಲು ಹೇಳಿಕೊಟ್ಟರು. ದಿನದ ಕೊನೆಗೆ ಅವರೆಲ್ಲರೂ ಜತೆಯಾಗಿ ಹಾಡಿ ಉತ್ತಮವಾದ ಮುಕ್ತಾಯವನ್ನು ಅಂದಿನ ಕಾರ್ಯಕ್ರಮಕ್ಕೆ ನೀಡಿದರು.

ಶ್ರೀ ಮನ್ಮಧ್ವ ಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠ ಶಾಲೆಯ ಪ್ರಾಂಶುಪಾಲ ಡಾ. ಸುರೇಶಾಚಾರ್ಯರು ಹರಿದಾಸರ ಜೀವನ ಪದ್ಧತಿ ಕುರಿತು ಪ್ರವಚನವೊಂದನ್ನು ನೀಡಿದರು. ರಾಮಾಯಣ ಮಹಾಕಾವ್ಯದಲ್ಲಿಯ ಹನುಮಂತನೇ ದಾಸಪದದ ಆದ್ಯಪ್ರವರ್ತಕನೆಂದು ಹೇಳಿ ಅವನ ನಡೆ ನುಡಿ, ಜೀವನಾದರ್ಶಗಳೇ ಹರಿದಾಸರ ನಡೆನುಡಿ ಜೀವನಾದರ್ಶಗಳಾಗಿವೆ ಎಂದು ರಸವತ್ತಾಗಿ ಪ್ರವಚನ ಗೈದರು.

ಕೀರ್ತನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಆ ಕೀರ್ತನೆಗಳ ಸ್ವಾರಸ್ಯ, ಕ್ಲಿಷ್ಟತೆ, ಅದರಲ್ಲಿ ಹುದುಗಿರುವ  ಪೌರಾಣಿಕ ಐತಿಹಾಸಿಕ ಅಂಶಗಳನ್ನು ವಿಶ್ಲೇಷಿಸುತ್ತಾ ನೆರೆದವರನ್ನು ಜಿಜ್ಞಾಸುಗಳಾಗಿ ಪರಿವರ್ತಿಸಿದವರು ಅಂಬಾತನಯರು.

ಮುಂದೆ ವಿದ್ವಾನ್ ಗೋಪಾಲಾಚಾರ್ಯರು ದಾಸರ ಕೀರ್ತನೆಗಳಲ್ಲಿ ಬರುವ ತಾರತಮ್ಯ ಜ್ಞಾನದ ಬಗೆಗೆ, ವಿಸ್ತಾರವಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ವಿಶ್ಲೇಷಿಸಿ ಹೇಳಿದರು.

ಎರಡನೆಯ ದಿನದ ಕಾರ್ಯಕ್ರಮದಲ್ಲಿ ಕೀರ್ತನ ಶಿಬಿರವನ್ನು ಮಂಗಳೂರಿನ ಹಿರಿಯ ದಾಸ ಸಂತರಾಧಾಕೃಷ್ಣ ಬಾಳಿಗರು ನಡೆಸಿಕೊಟ್ಟರು. ಹತ್ತು ವರುಷಗಳಿಗೂ  ಹೆಚ್ಚು ಕಾಲ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಾರ್ಷಿಕ ಭಜನಾ ಕಮ್ಮಟವನ್ನು ನಡೆಸಿಕೊಟ್ಟ ಅನುಭವದ ನೆಲೆಯಲ್ಲಿ ಉಡುಪಿಯ ಕಾರ್ಯಕ್ರಮವನ್ನೂ ಕೂಡಾ ಅಚ್ಚುಕಟ್ಟಾಗಿ ನಡೆಸಿದರು. ಸುಮಾರು ೮ ಕೀರ್ತನೆಗಳನ್ನು ಶಿಬಿರದಲ್ಲಿ ಪಾಲ್ಗೊಂಡವರಿಗೆ ಹೃದ್ಗತಗೊಳಿಸಿದರು.

ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಂಪನ್ಮೂಲ ವ್ಯಕ್ತಿಯಾಗಿ ಉತ್ತಮ ಪ್ರವಚನವನ್ನು ನೀಡಿದರು.  ವಿದ್ವಾನ್ ಗೋಪಾಲಾಚಾರ್ಯರು ಕೂಡಾ ಶಿಬಿರದಲ್ಲಿ ಸಹಕರಿಸಿದರು.

ಸಮಾರೋಪ ಸಮಾರಂಭದಲ್ಲಿ ಸದ್ಯ ಮಂಗಳೂರಿನಲ್ಲಿ ನೆಲೆಸಿರುವ  ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ  ಪ್ರಾಧ್ಯಾಪಕ ಪ್ರೊ. ಎ.ವಿ ನಾವಡ ಅವರು ಪಾಲ್ಗೊಂಡಿದ್ದರು. ಸಮಾಜದಲ್ಲಿಯ  ಹುಳುಕುಗಳನ್ನು  ಎತ್ತಿ ಆಡಿ ಜನರ ಹೃದಯವನ್ನು ಶುಭ್ರಗೊಳಿಸಿದ  ಕುಲ, ಜಾತಿ, ಸಂಪತ್ತು ಮೊದಲಾದ ನಶ್ವರ ವಿಷಯಗಳ ಬಗೆಗೆ ತಲೆಕೆಡಿಸಿಕೊಂಡು ಸ್ವಾಸ್ಥ್ಯವನ್ನು ಕಳೆಕೊಳ್ಳುವ, ಸಮಾಜದ ಸ್ವಾಸ್ತ್ಯವನ್ನು ಕೆಡಿಸುವವರ ಬಗೆಗೆ  ಎಚ್ಚರಿಕೆಯ ಮಾತುಗಳನ್ನು ಆಡಿದರು.

ಭಾಗವಹಿಸಿದ್ದ ಶಿಬಿರಾರ್ಥಿಗಳು ತಾವು ವಿಶೇಷ ರೀತಿಯಲ್ಲಿ ಪ್ರಯೋಜನ ಹೊಂದಿದ್ದೇವೆ ಎಂಬುದನ್ನು ವಿವರಿಸಿದ್ದಲ್ಲದೆ, ಮುಂದೆಯೂ  ವರ್ಷಂಪ್ರತಿ ಇಂತಹ ಕಾರ್ಯಕ್ರಮಗಳು ಏರ್ಪಟ್ಟು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಸರ ಕೀರ್ತನೆಗಳನ್ನು ಅಭ್ಯಾಸ ಮಾಡುವಂತಾಗಲಿ ಎಂದು ಹಾರೈಸಿದರು.

 

ಕನಕ/       /೨೦೧೧-೨೦೧೨
೦೭.೦೬.೨೦೧೧

ಕನಕ ಕೀರ್ತನ ತರಬೇತಿ ಶಿಬಿರ

ಕನಕದಾಸರ ಕೀರ್ತನೆಗಳನ್ನು ನಮ್ಮ ತರುಣರಲ್ಲಿ ಹೆಚ್ಚು ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಉಡುಪಿಯ ಕನಕದಾಸ ಅಧ್ಯಯನ ಸಂಶೋಧನ ಪೀಠದ ವತಿಯಿಂದ ಕನಕ ಕಿರ್ತನ ತರಬೇತಿ ಶಿಬಿರವೊಂದನ್ನು ಬ್ರಹ್ಮಾವರ ನಿರ್ಮಲಾ ಪ್ರೌಢ ಶಾಲೆಯ ಅಧ್ಯಾಪಕ ಶ್ರೀ ಎಚ್. ಚಂದ್ರ ಶೇಖರ ಕೆದ್ಲಾಯರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರವು ಜೂನಿನಿಂದ ದಶಂಬರ ತಿಂಗಳವರೆಗೆ ಪ್ರತಿ ವಾರಾಂತ್ಯದ ಶನಿವಾರ ಅಪರಾಹ್ಣ ನಡೆಯಲಿರುವುದು. ಬ್ರಹ್ಮಾವರದ ಆಸುಪಾಸಿನ ಆಸಕ್ತ ಪ್ರೌಢ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದೇ ಜೂನ್ ತಿಂಗಳ ಶನಿವಾರ ೧೧, ೨೦೧೧ ರಂದು ಬ್ರಹ್ಮಾವರದ ನಿರ್ಮಲಾ ಪ್ರೌಢ ಶಾಲೆಯಲ್ಲಿ ಅಪರಾಹ್ಣ ಗಂಟೆ ೩.೦೦ಕ್ಕೆ ಖುದ್ದ್ದಾಗಿ ಹಾಜರಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.

ನಿರ್ದೇಶಕರು

Photos

Top

Halegannada rasaswada

ಹಳಗನ್ನಡ ಕಾವ್ಯ - ರಸಾಸ್ವಾದ ಶಿಬಿರ

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಅಗೋಸ್ತು ತಿಂಗಳ ೧೯ ಹಾಗೂ ೨೦, ೨೦೧೧ ಈ ಎರಡು ದಿನಗಳಲ್ಲಿ ಹಳಗನ್ನಡ ಕಾವ್ಯ - ರಸಾಸ್ವಾದನ ಶಿಬಿರ ನಡೆಯಲಿದೆ. ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಕನ್ನಡ ಭಾಷಾ ಶಿಕ್ಷಕ/ ಹಾಗೂ ಉಪನ್ಯಾಸಕರುಗಳಿಗೆ ಪ್ರಯೋಜನಕರವಾಗುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಎಂ. ರಾಮಚಂದ್ರ,  ಡಾ. ತಾಳ್ತಜೆ ವಸಂತ ಕುಮಾರ, ಡಾ. ಮಹಾಬಲೇಶ್ವರ ರಾವ್,  ಡಾ. ಪ್ರಭಾಕರ ಜೋಶಿ,ಡಾ. ಪ್ರೊ. ಕೆ. ರಾಮದಾಸ, ಡಾ. ಶ್ರೀಕಾಂತ ಸಿದ್ಧಾಪುರ, ಉಪ್ಪಂಗಳ ರಾಮ ಭಟ್, ಡಾ. ಪಾದೇಕಲ್ಲು ವಿಷ್ಣು ಭಟ್ಟ, ಪ್ರೊ. ಮುರಲೀಧರ ಉಪಾಧ್ಯ, ಪ್ರೊ. ಚಿನ್ನಸ್ವಾಮಿ, ಶ್ರೀ ಚಂದ್ರಶೇಖರ ಕೆದ್ಲಾಯ ಮೊದಲಾದವರು ಭಾಗವಹಿಸುವರು. ಪೂರ್ತಿಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಹಾಜರಿ ಪ್ರಮಾಣ ಪತ್ರವನ್ನು ನೀಡಲಾಗುವುದು. ಅನ್ಯಕಾರ್ಯನಿಮಿತ್ತ ರಜೆಗಾಗಿ ಇಲಾಖೆಯನ್ನು ಕೋರಲಾಗಿದೆ.

ಆಸಕ್ತರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ  ಕೇಂದ್ರದ ನಿರ್ದೇಶಕರಿಗೆ ಬರೆಯಬಹುದು. ಶಿಬಿರಕ್ಕೆ ಪ್ರವೇಶ ಶುಲ್ಕವಿಲ್ಲ.

Photos

Top

Kadangodlu_silverjubilee 1979-2011 awardee

ಕವಿ ಸಮಾವೇಶ - ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
ಕೃತಿ ಬಿಡುಗಡೆ -ಕವಿತಾ ವಾಚನ

ಕಡೆಂಗೋಡ್ಲು ಶಂಕರಭಟ್ಟರು (೧೯೦೪-೧೯೬೮) ಎಳವೆಯಲ್ಲೆ ಪ್ರತಿಭಾಶಾಲಿಯಾಗಿ ಕವಿ, ಸಾಹಿತಿ, ಪತ್ರಕರ್ತರಾಗಿ ಖ್ಯಾತಿ ಗಳಿಸಿದ ವಿದ್ವಾಂಸರು. ಅವರ ಹೆಸರಲ್ಲಿ ನಡೆಯುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಸಪ್ತಂಬರ ೩, ಶನಿವಾರ ಅಪರಾಹ್ಣ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯುವುದು.

ಹಿರಿಯರೂ, ಜಾನಪದತಜ್ಞರೂ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷರೂ ಆದ ಮಾನ್ಯ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಕಡೆಂಗೋಡ್ಲು  ಪೂರ್ವಸೂರಿಗಳನ್ನು ಇತರ ವಿದ್ವಾಂಸರನ್ನು ಗೌರವಿಸಲಿರುವರು.

೧೯೭೯ರಿಂದ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೊ. ರಾಮದಾಸ, ಡಾ. ನಾ ಮೊಗಸಾಲೆ, ಅಂಶುಮಾಲಿ, ದುಂಡಿರಾಜ್, ಜಯರಾಮ ಕಾರಂತ, ಅರುಂಧತೀ ರಮೇಶ, ಡಾ.ಜಯಪ್ರಕಾಶ್ ಮಾವಿನಕುಳಿ, ಡಾ. ಉಪ್ಪಂಗಳ ರಾಮಭಟ್ಟ, ಪ್ರೊ. ವಸಂತ ಕುಷ್ಟಗಿ, ಡಾ. ಗೀತಾ ವಸಂತ, ಸುಕನ್ಯಾ ಕಳಸ ಮುಂತಾದ ಒಟ್ಟು ಮೂವತ್ತಮೂರು ಕವಿಗಳು ಭಾಗವಹಿಸುವರು. ಹಾಗೂ ಹಿರಿಯ ವಿಮರ್ಶಕರೂ, ವಿದ್ವಾಂಸರೂ ಆದ ಪ್ರೊ. ಮುರಳೀಧರ ಉಪಾಧ್ಯ, ಡಾ. ಯು.ಪಿ. ಉಪಾಧ್ಯಾಯ, ಡಾ. ಪಾದೆಕಲ್ಲು ವಿಷ್ಣುಭಟ್ಟ, ಎ. ಈಶ್ವರಯ್ಯ, ಪ್ರೊ. ಹಯವದನ ಉಪಾಧ್ಯ, ಡಾ. ಮಹಾಬಲೇಶ್ವರ ರಾವ್,  ಪ್ರೊ. ಎ.ವಿ.ನಾವಡ, ಪ್ರೊ. ನಾಗರಾಜ ಜವುಳಿ, ಡಾ. ಜನಾರ್ದನ ಭಟ್, ಅಂಬಾತನಯ ಮುದ್ರಾಡಿ, ಡಾ. ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣುಭಟ್ಟರಿಂದ ಸಂಪಾದಿತಗೊಂಡ ಪಂಪನ ಕಾವ್ಯದ ಭಾನುಮತಿಯ ನೆತ್ತ ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ನಡೆಯಲಿದೆ.

ಪ್ರಸ್ತುತ ವರುಷದ ಕಾವ್ಯ ಪ್ರಶಸ್ತಿ ಪುರಸ್ಕಾರವನ್ನು ಶ್ರೀ ಚಿದಾನಂದ ಸಾಲಿಯವರಿಗೆ ನೀಡಿ ಗೌರವಿಸಲಾಗುವುದು. ಅಲ್ಲದೆ ಇತ್ತೀಚೆಗೆ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್. ಶಾಂತರಾಮ್ ಅವರಿಗೆ ಗೌರವ, ಖ್ಯಾತ ಗ್ರಂಥ ಕರ್ತೃ ಪ್ರೊ. ಎ.ವಿ ನಾವಡರಿಗೆ ಸಂಮಾನ ಸಮಾರಂಭದೊಂದಿಗೆ ಉದಯೋನ್ಮುಖ ಕವಿಗಳಿಗೆ ತಮ್ಮ ಕಾವ್ಯವನ್ನು ವಾಚಿಸಲು ಅವಕಾಶವಿದೆ. ಕವಿ ಕಡೆಗೋಂಡ್ಲು ಅವರ ಕವಿತೆಗಳ ವಾಚನ ಕಾರ್ಯಕ್ರಮದ ಅಂಗವಾಗಿದೆ.

  Photos

Top

Kammata

ಸಂಶೋಧನ ಕಮ್ಮಟ

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಸಾಹಿತ್ಯ ಪರಿಷತ್ತು ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಗಳ ಆಶ್ರಯದಲ್ಲಿ ಎರಡು ದಿನಗಳ ಸಂಶೋಧನ ಕಮ್ಮಟವನ್ನು ಜುಲಾಯಿ ೨೨ ಹಾಗೂ ೨೩, ೨೦೧೧ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ನಮ್ಮ ತರುಣ ಪೀಳಿಗೆ ಬೇರೆಬೇರೆ ವಿಷಯಗಳ ಕುರಿತಂತೆ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವುದು, ತೊಡಗಿರುವುದು ಬೆಳವಣಿಗೆಯ ಸಂಕೇತವಾಗಿದೆ. ಇಂತಹ ಆಸಕ್ತಿರಿಗೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಜಿಲ್ಲೆಗಳಲ್ಲಿ ಎರಡು ದಿನಗಳ ಕಮ್ಮಟ ನಡೆಸಲು ಸಾಹಿತ್ಯ ಪರಿಷತ್ತು ಗೋವಿಂದ ಪೈ ಸಂಶೋಧನ ಕೇಂದ್ರದ ಸಹಭಾಗಿತ್ವದಲ್ಲಿ ಈ ಕಮ್ಮಟವನ್ನು ನಡೆಸಲಿದ್ದು ಇದರ ಉದ್ಘಾಟನ ಸಮಾರಂಭವು ಹಿರಿಯ ವಿದ್ವಾಂಸ ಸಂಶೋಧಕ ತಾಳ್ತಜೆ ವಸಂತ ಕುಮಾರರ ಅಧ್ಯಕ್ಶತೆಯಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರು, ಅನೇಕ ಮಂದಿ ಪಿಎಚ್.ಡಿ (ಸಂಶೋಧನ)ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೂ, ಉತ್ತಮ ವಾಗ್ಮಿಗಳೂ ಆಗಿರುವ ಡಾ. ಬಿ ಸುರೇಂದ್ರ ರಾವ್ ಅವರು ಆಶಯ ಮಾತುಗಳನ್ನಾಡಲಿದ್ದಾರೆ. ಸಾಹಿತ್ಯ ಸಂಶೋಧನೆ ಐತಿಹಾಸಿಕ ಸಂಶೋಧನೆ, ಸಾಂಸ್ಕೃತಿಕ ಸಂಶೋಧನೆಗಳ ಪರಸ್ಪರ ಪೂರಕತೆ ಸಂಶೋಧನ ವಿಧಾನಗಳು ವಿವರಣಾತ್ಮಕ, ವಿಶ್ಲೇಷಣಾತ್ಮಕ ಸಂಶೋಧನೆಗಳು, ಸಂಶೋಧನ ಸಮಸ್ಯೆಗಳು ಮತ್ತು ಆಕರ ಸಾಮಗ್ರಿಗಳು ಹೀಗೆ ಹಲವು ವಿಷಯಗಳ ಬಗ್ಗೆ ತಜ್ಞರಾದ ಡಾ. ಸತ್ಯನಾರಾಯಣ ಮಲ್ಲಿಪಟ್ಳ, ಡಾ. ಗಾಯತ್ರಿ ನಾವಡ, ಡಾ ಕಬ್ಬಿನಾಲೆ ವಸಂತ ಭರದ್ವಾಜ್, ಡಾ ಪುಂಡಿಕಾಯಿ ಗಣಪಯ್ಯ ಭಟ್ಟ , ಡಾ.ಯು.ಮಹೇಶ್ವರಿ, ಡಾ. ಜಗದೀಶ ಶೆಟ್ಟಿ, ಡಾ ಪಾದೇಕಲ್ಲು ವಿಷ್ಣು ಭಟ್ಟ, ಪ್ರೊ. ಮುರಳೀಧರ ಉಪಾಧ್ಯ ಮೊದಲಾದವರು ಮಾರ್ಗದರ್ಶಕ, ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸುವರು. ಸಮಾರೋಪ ಸಮಾರಂಭದಲ್ಲಿ ಖ್ಯಾತ ಭಾಷಾತಜ್ಞ ನಿಘಂಟು ಪಿತಾಮಹ ಡಾ. ಯು.ಪಿ ಉಪಾಧ್ಯಾಯರು ಭಾಗವಹಿಸುತ್ತಾರೆ.

ಆಸಕ್ತ ತರುಣರು ಈ ಅಮೂಲ್ಯ ಕಮ್ಮಟದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾ ಸಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಬಾತನಯ ಮುದ್ರಾಡಿಯವರು ಹಾಗೂ ಕೇಂದ್ರ ನಿರ್ದೇಶಕ ಕೃಷ್ಣ ಭಟ್ಟರು ಜತೆಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

  Photos

Top

Karantha Namana

ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಉಡುಪಿ (ರಿ) ಇದರ ಅಧ್ಯಕ್ಷರಾದ  ಉಡುಪಿ ಜಿಲ್ಲಾಧಿಕಾರಿ ಡಾ. ಎಂ.ಟಿ ರೇಜು ಅವರ ಹಿರಿತನದಲ್ಲಿ ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ. ಕೋಟ ಶಿವರಾಮ ಕಾರಂತರ ೧೦೯ನೇ ಜನ್ಮ ದಿನಾಚರಣೆಯನ್ನು ಅಕ್ತೋಬರ ೧೦,  ಸೋಮವಾರ ಹಮ್ಮಿಕೊಳ್ಳಲಾಗಿದೆ.  ವಿದ್ವಾಂಸರಾದ  ಡಾ. ರಾಮಚಂದ್ರ ದೇವ, ಡಾ. ಎ.ಪಿ ರಾಧಾಕೃಷ್ಣ, ಎ ಈಶ್ವರಯ್ಯ , ಡಾ ಆಶಾದೇವಿ, ಎಂ. ಎನ್, ಕೆ ಸತ್ಯನಾರಾಯಣ ಬೆಂಗಳೂರು, ಶ್ರೀಧರ ಭಟ್ ಬೆಂಗಳೂರು, ಪುರಂದರ ಭಟ್ ಪುತ್ತೂರು, ಸುಧೀರ್ ರಾವ್ ಕೊಡವೂರು ಮೊದಲಾದವರು ಕಾರಂತರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Photos

Top

K K Hebbar janma shathabdhi

ಉಡುಪಿ: ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಡಾ. ಕೆ.ಕೆ ಹೆಬ್ಬಾರ ಜನ್ಮ ಶತಮಾನೋತ್ಸವ ಸಮಿತಿ  ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಚಿತ್ರಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಜನ್ಮ ಶತಾಬ್ದಿಯಂದು ಹುಟ್ಟೂರು ಕಟ್ಟಿಂಗೇರಿ ಸಂತ ಲಾರೆನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು ಮೂಡುಬೆಳ್ಳೆ ಇಲ್ಲಿ ದಿನಾಂಕ: ೧೭.೦೯.೨೦೧೧ರಂದು ಬೆಳಿಗ್ಗೆ ೯.೩೦ರಿಂದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಡಾ. ಕೆ ಕೆ ಹೆಬ್ಬಾರರ ಚಿತ್ರಪ್ರದರ್ಶನ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿರುವುದು ಭಾಗವಹಿಸುವವರು ಶ್ರೀಮತಿ ರೇಖಾ ಹೆಬ್ಬಾರ್ ರಾವ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ.ವಿ. ಜೊಸ್ವಿ ಫೆರ್ನಾಂಡಿಸ್, ಧರ್ಮಗುರುಗಳು, ಸಂತ ಲಾರೆನ್ಸ್ ಚರ್ಚ್ ಇವರು ವಹಿಸಲಿರುವರು. ಶ್ರೀ ಉಪಾಧ್ಯಾಯ ಮೂಡುಬೆಳ್ಳೆ ಇವರಿಂದ  ಹೆಬ್ಬಾರರ ಬಣ್ಣದ ಬದುಕು ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಲಿರುವುದು ಎಂದು ತಾಲೂಕು ಪಂಚಾಯತ್ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ದೇಶಕರು
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿ
-------------------------------------------------------------------------------------------------------------------------------------------

ಉಡುಪಿಯಲ್ಲಿ ಡಾ. ಕೆ.ಕೆ. ಹೆಬ್ಬಾರ ಜನ್ಮಶತಮಾನೋತ್ಸವ
ದಿನಾಂಕ: ೧೬, ೧೭, ೧೮/೨೦೧೧ರವರೆಗೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಡಾ. ಕೆ. ಕೆ. ಹೆಬ್ಬಾರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲೆಗಳ  ಪ್ರಸಿದ್ಧ ಚಿತ್ರಕಲಾವಿದರಾಗಿ ರಾಷ್ಟ್ರಮಾನ್ಯತೆಗಳಿಸಿದ್ದ ಕೆ. ಕೆ ಹೆಬ್ಬಾರರೆಂದೇ ಪ್ರಸಿದ್ಧರಾಗಿರುವ ಡಾ. ಕಟ್ಟಿಂಗೇರಿ ಕೃಷ್ಣ ಹೆಬ್ಬಾರರ ಜನ್ಮ ಶತಾಬ್ದಿ ಸಮಾರಂಭವನ್ನು ಉಡುಪಿ ಹಾಗೂ ಅವರ ಹುಟ್ಟೂರಾದ ಕಟ್ಟಿಂಗೇರಿಯಲ್ಲಿ ಇದೇ ತಿಂಗಳ ೧೬, ೧೭, ೧೮ ರಂದು ವಿಶಿಷ್ಟವಾಗಿ ನಡೆಸಲು ಉದ್ದೇಶಿಸಲಾಗಿದೆ. ಉಡುಪಿಯ ಜಿಲ್ಲಾಡಳಿತ ಮತ್ತು ಹೆಬ್ಬಾರರ ಜನ್ಮ ಶತಮಾನೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಸ್ಥಳೀಯ ಸಮಾನ ಮನಸ್ಕ ಸಾಂಸ್ಕೃತಿಕ, ಕಲಾ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯುವ ಉತ್ಸವವನ್ನು ಸೆ. ೧೬ ರಂದು ಶುಕ್ರವಾರ ಪೂರ್ವಾಹ್ಣ ಗಂಟೆ ೧೧.೦೦ಕ್ಕೆ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ರಾಜ್ಯ ಮೂರನೇ ಹಣಕಾಸು ಅನುಷ್ಠಾನ ಆಯೋಗದ ಅಧ್ಯಕ್ಷ ಶ್ರೀ ಎ.ಜಿ ಕೊಡ್ಗಿಯವರು ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ. ರಘುಪತಿ ಭಟ್ ವಹಿಸಲಿರುವರು.  ಮುಖ್ಯ ಅತಿಥಿಗಳಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ವಿ ಸದಾನಂದ ಗೌಡರು ಆಗಮಿಸಲಿರುವರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್ ಆಚಾರ್ಯರು ಸೇರಿದಂತೆ ಅನೇಕ ಗಣ್ಯಮಹನೀಯರು, ಜನಪ್ರತಿನಿಧಿಗಳು ಉಪಸ್ಥಿತರಿರುವರು.

ಉಭಯ ಜಿಲ್ಲೆಗಳ ಪ್ರಸಿದ್ಧ ಚಿತ್ರಕಲಾವಿದರುಗಳಾದ ಶ್ರೀ ರಮೇಶ್ ರಾವ್, ಕೆ. ಎಲ್ ಭಟ್, ಉಪಾಧ್ಯಾಯ ಮೂಡುಬೆಳ್ಳೆ, ಪುರುಷೋತ್ತಮ ಅಡ್ವೆ, ಸುಲೋಚನಾ ವೇಣುಗೋಪಾಲ್, ಗಣೇಶ ಸೋಮಯಾಜಿ, ವೀಣಾ ಶ್ರೀನಿವಾಸ್, ರಾಜೇಂದ್ರ ಕೇದಿಗೆ ಮೊದಲಾದವರು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಲಿರುವರು.

ಉತ್ಸವದ ನಿಮಿತ್ತ ಹಮ್ಮಿಕೊಳ್ಳಲಾದ ವಿಚಾರಗೋಷ್ಠಿಗಳಲ್ಲಿ ಖ್ಯಾತ ಕಲಾವಿಮರ್ಶಕ, ಎ. ಈಶ್ವರಯ್ಯ, ಡಾ. ಮಹಾಲಿಂಗ ಭಟ್, ಚಿತ್ರಕಲಾವಿದ ಪಿ. ಎನ್.ಆಚಾರ್ಯ, ಚಿ.ಸು. ಕೃಷ್ಣ ಶೆಟ್ಟಿ ಮುಂತಾದವರು ಭಾಗವಹಿಸುವರು.

ಸೆ. ೧೮, ಭಾನುವಾರ ಸಾಯಂಕಾಲ ೪.೦೦ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಗೋವಿಂದ ಎಂ. ಕಾರಜೋಳ ಅವರು ಭಾಗವಹಿಸಲಿದ್ದು ಶಾಸಕ  ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು.  ಸಚಿವ ಡಾ. ವಿ.ಎಸ್ ಆಚಾರ್ಯ ಉಪಸ್ಥಿತರಿರುವರು. ಉತ್ಸವದ ನಿಮಿತ್ತ ಪ್ರತಿನಿತ್ಯ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಇದರಲ್ಲಿ ಶ್ರೀಮತಿ ಸಂಗೀತ ಬಾಲಚಂದ್ರ ಇವರಿಂದ ಸುಗಮ ಸಂಗೀತ, ತಂತ್ರಾಡಿ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ, ರಂಗಭೂಮಿ(ರಿ) ಉಡುಪಿ ಇವರಿಂದ ನಾಟಕ ಪ್ರದರ್ಶನ ನಡೆಯಲಿದೆ.  ಶ್ರೀಮತಿ ರೇಖಾ  ಹೆಬ್ಬಾರರಿಂದ ರೇಖಾಚಿತ್ರದ ಪ್ರಾತ್ಯಕ್ಷಿಕೆ ನಡೆಯಲಿದೆ. 

ಸೆ. ೧೭ನೇ ಶನಿವಾರ ಹೆಬ್ಬಾರರ ಹುಟ್ಟೂರಾದ ಕಟ್ಟಿಂಗೇರಿಯಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನೊಳಗೊಂಡಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಕೆ. ಕೆ ಹೆಬ್ಬಾರರ ಜನ್ಮಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಎಂ. ಟಿ. ರೇಜು, ಜಿಲ್ಲಾಧಿಕಾರಿಗಳು, ಉಡುಪಿ ಇವರು ಜಿಲ್ಲೆಯ ಹೆಮ್ಮೆಯ ಕಲಾವಿದರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಕಲಾಸಕ್ತ ಜನತೆ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.

ಪ್ರೊ. ಹೆಚ್. ಕೃಷ್ಣ ಭಟ್
ಸಂಚಾಲಕರು/ನಿರ್ದೇಶಕರು
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ
ಹಾಗೂ ಸದಸ್ಯರು, ಕೆ. ಕೆ. ಹೆಬ್ಬಾರ
ಜನ್ಮಶತಮಾನೋತ್ಸವ ಸಮಿತಿ, ಉಡುಪಿ

ಎಸ್.ಎಚ್.ಶಿವರುದ್ರಪ್ಪ
ಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ
ಸದಸ್ಯ ಕಾರ್ಯದರ್ಶಿ, ಕೆ. ಕೆ ಹೆಬ್ಬಾರ
ಜನ್ಮಶತಮಾನೋತ್ಸವ ಸಮಿತಿ, ಉಡುಪಿ

ಡಾ. ಎಂ.ಟಿ ರೇಜು
ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ
ಹಾಗೂ ಅಧ್ಯಕ್ಷರು ಕೆ. ಕೆ. ಹೆಬ್ಬಾರ
ಜನ್ಮಶತಮಾನೋತ್ಸವ ಸಮಿತಿ,
ಉಡುಪಿ

Photos

Top

Mohiniattam

ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ
ಭಾರತೀಯ ವಿದ್ಯಾಭವನ, ಉಡುಪಿ-ಮಣಿಪಾಲ
ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜು

ನಾಟ್ಯಾಲಯ ಪೆರುಂಬೂರು ಇದರ ಕಲಾಗುರು ಕಲಾಮಂಡಲಂ ಸುಮತಿ
ಮತ್ತು ತಂಡದವರಿಂದ

ಮೋಹಿನಿಯಾಟ್ಟಂ
ಅಕ್ತೋಬರ ೧೨, ೨೦೧೧
ಸಂಜೆ ಗಂಟೆ ೬.೦೦ರಿಂದ
ನೂತನ ರವೀಂದ್ರ ಮಂಟಪ

//ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರುವ//

ಟಿ. ಸತೀಶ ಯು. ಪೈ
ಚೆಯರ್‌ಮೆನ್
ಭಾರತೀಯ ವಿದ್ಯಾಭವನ,
ಉಡುಪಿ-ಮಣಿಪಾಲ

ಹೆರಂಜೆ ಕೃಷ್ಣ ಭಟ್ಟ
ನಿರ್ದೇಶಕರು
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ
ಉಡುಪಿ

ಡಾ. ಟಿ.ಎಂ ರೇಜು
ಅಧ್ಯಕ್ಷರು
ಡಾ. ಕೋಟ ಕಾರಂತ ಟ್ರಸ್ಟ್

Photos

Top

 

Samaga sanmana

ನಮ್ಮ ಎಂ.ಜಿ.ಎಂ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ, ಪ್ರಾಂಶುಪಾಲ ಪ್ರೊ. ಎಂ.ಎಲ್ ಸಾಮಗರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರುಷಗಳ ಅವಧಿಗೆ ನಿಯೋಜಿತರಾಗಿದ್ದಾರೆಂದು ತಿಳಿಸಲು ಸಂತೋಷವೆನಿಸುವುದು.

ಶ್ರೀಯುತರು ಆಂಗ್ಲಭಾಷಾ ಪ್ರಾಧ್ಯಾಪಕರಾಗಿದ್ದು ಯಕ್ಷಗಾನ ಕಲೆಯ ಸಾಂಗೋಪಾಂಗಗಳನ್ನು ಅಭ್ಯಸಿಸಿದ ಅಪೂರ್ವ ವ್ಯಕ್ತಿತ್ವವುಳ್ಳ ಉಭಯತಿಟ್ಟುಗಳ ಮೇರು ಕಲಾವಿದ.

ಅವರನ್ನು ಉಡುಪಿಯ ಯಕ್ಷಗಾನ ಕಲಾರಂಗ ಹಾಗೂ ಎಂ.ಜಿ.ಎಂ ಕಾಲೇಜು ಮತ್ತು ಅಂಗಸಂಸ್ಥೆಗಳು ಗೌರವ ನೀಡಿ ಸಂಮಾನಿಸಲು ನಿಶ್ಚಯಿಸಲಾಗಿದ್ದು ಕಾರ್‍ಯಕ್ರಮವು ಸಪ್ತಂಬರ ೧೩, ಮಂಗಳವಾರ ಸಂಜೆ ಗಂಟೆ ೬.೦೦ಕ್ಕೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವುದು ಎಂದು ತಿಳಿಸಲು ಹೆಮ್ಮೆ ಎನಿಸುವುದು. ನಿಮ್ಮ ಉಪಸ್ಥಿತಿಯನ್ನು ನಿರಿಕ್ಷಿಸುತ್ತೇವೆ.

Photos

Top

Sediyapu Award function

೨೦೧೧ನೇ ಸಾಲಿನ ಸೇಡಿಯಾಪು ಪ್ರಶಸ್ತಿ
ಡಾ| ತಾಳ್ತಜೆ ವಸಂತ ಕುಮಾರ್‌ಗೆ

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ೨೦೧೧ನೇ ಸಾಲಿನ ಸೇಡಿಯಾಪು ವಿದ್ವತ್ಪ್ರಶಸ್ತಿಯನ್ನು  ಖ್ಯಾತ ವಿದ್ವಾಂಸ ಡಾ| ತಾಳ್ತಜೆ ವಸಂತ ಕುಮಾರ ಅವರಿಗೆ ನೀಡುವುದಾಗಿ ಕೇಂದ್ರದ ನಿರ್ದೇಶಕ ಪ್ರೊ. ಹೆಚ್. ಕೃಷ್ಣ ಭಟ್ಟ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ ತಿಂಗಳಲ್ಲಿ ಕಾರ್ಕಳದಲ್ಲಿ ನಡೆಯಲಿದೆ.

ಬಾಲ್ಯದಿಂದಲೂ ಸಾಹಿತ್ಯಾಸಕ್ತಿಯನ್ನು ರೂಢಿಸಿಕೊಂಡಿರುವ ಡಾ| ತಾಳ್ತಜೆ ವಸಂತ ಕುಮಾರರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪ್ರಥಮ ದರ್ಜೆ, ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿ ಸುವರ್ಣಪದಕ  ಪಡೆದವರು. ಅನಂತರ, “ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ” ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ಸಿದ್ಧಪಡಿಸಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಗಳಿಸಿದರು. ಡಾ| ತಾಳ್ತಜೆಯವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೫ ವರ್ಷ ಸೇವೆ ಸಲ್ಲಿಸಿ ೧೯೮೬ರಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಸೇರಿ, ೧೯೮೯ರಿಂದ ಆ ವಿಭಾಗದ ಮುಖ್ಯಸ್ಥರಾದವರು. ೨೦೦೮ರ ದಶಂಬರದಲ್ಲಿ ಸೇವಾ ನಿವೃತ್ತರಾಗಿ, ಪ್ರಸ್ತುತ ತಮ್ಮೂರು ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಸಮೀಪ ನೆಲೆಸಿದ್ದಾರೆ.

ಕಾವ್ಯ ಮೀಮಾಂಸೆ, ಜಾನಪದ, ಸಂಸ್ಕೃತಿಯ ಅಧ್ಯಯನ ಇವು ತಾಳ್ತಜೆಯವರ ಒಲವಿನ ಕ್ಷೇತ್ರಗಳು. ಹಳಗನ್ನಡ ಸಾಹಿತ್ಯದಲ್ಲಿ ಶ್ರೀಯುತರು ವಿಶೇಷ ಪರಿಶ್ರಮ ಗಳಿಸಿರುತ್ತಾರೆ.  ಡಾ| ತಾಳ್ತಜೆಯವರ  ಮಾರ್ಗದರ್ಶನದಲ್ಲಿ ೧೫ ಮಂದಿ ಪಿಎಚ್.ಡಿ ಹಾಗೂ ೧೮ ಮಂದಿ ಎಂ.ಫಿಲ್. ಪದವಿ ಪಡೆದಿರುತ್ತಾರೆ.

ಹರಿಹರನ ರಗಳೆಗಳು (ವಿಮರ್ಶೆ), ಸಿಂಗಾರ (ವಿಮರ್ಶೆ), ಸಾಧನೆ (ಸಂಪಾದಿತ), ಮರೀಚಿಕೆ (ಕಾದಂಬರಿ), ಸಾರಸ(ಸಂಶೋಧನೆ,) ಬೇರುಬಿಳಲು (ಸಂಪಾದಿತ), ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ (ಸಂಶೋಧನೆ), ಆಯ್ದ ಲೇಖನಗಳು (ವಿಮರ್ಶೆ), ಸೋಪಾನ (ಸಂಪಾದಿತ), ಸಂಶೋಧನ ರಂಗ (ಸಂಶೋಧನ ಕೈಪಿಡಿ), ಮುತ್ತಿನ ಸತ್ತಿಗೆ (ವಿಮರ್ಶೆ), ರಂ. ಶ್ರೀ. ಮುಗಳಿ, ವಿ.ಕೃ. ಗೋಕಾಕ, ಶಿವರಾಮ ಕಾರಂತ (ಜೀವನ-ಸಾಧನೆ), ಬೌದ್ಧಾಯನ (ಸಂಶೋಧನೆ), ಮತ್ತು ಹಣತೆಗೆ ಹನಿ ಎಣ್ಣೆ (ವಿಮರ್ಶೆ)ಇವು ತಾಳ್ತಜೆಯವರ ಪ್ರಕಟಿತ ಕೃತಿಗಳು. ಶ್ರೀಯುತರ ಕನ್ನಡ ಮತ್ತು ಆಂಗ್ಲ ಲೇಖನಗಳು ಸಾಹಿತ್ಯಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳನ್ನು ಸಂಘಟಿಸಿದ ಮತ್ತು ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ ಅನುಭವ ಹೊಂದಿದ್ದಾರೆ.

೧೯೯೩ರಲ್ಲಿ ಭಾರತ ಜರ್ಮನಿ ಸಾಂಸ್ಕೃತಿಕ ವಿನಿಮಯ ಯೋಜನೆಯನ್ವಯ ಜರ್ಮನಿಯ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಕನ್ನಡ-ಕರ್ಣಾಟಕ ವಿಷಯಕವಾಗಿ ವಿಶೇಷ ಉಪನ್ಯಾಸಗಳನ್ನು ನೀಡಿ ಬಂದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ರಾಜ್ಯ ಘಟಕದ ಸ್ಥಾಪಕಾಧ್ಯಕ್ಷರಾಗಿ (೧೯೯೨ ರಿಂದ ೧೯೯೫ರವರೆಗೆ) ಕಾರ್ಯ ನಿರ್ವಹಿಸಿದ್ದಾರೆ.

ಇವರ, “ಮುತ್ತಿನ ಸತ್ತಿಗೆ” ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ (೨೦೦೧), “ಬೌದ್ಧಾಯನ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೫),  ಹೊರನಾಡಿನ ಕನ್ನಡ ಸೇವೆಗಾಗಿ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ (೨೦೦೯),  ಕಾಂತಾವರ ಪ್ರಶಸಿ (೨೦೧೦) ದೊರಕಿವೆ.

ಇವರ ಪತ್ನಿ, ಡಾ| ಮಣಿಮಾಲಿನಿಯವರು ಸಣ್ಣಕಥೆ ಹಾಗೂ ವಿಮರ್ಶನ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಈಚೆಗೆ ದಿವಂಗತೆಯಾದ ಅವರ ನೆನಪಿಗಾಗಿ ಉಪ್ಪಿನಂಗಡಿಯಲ್ಲಿ “ವಸುಧಾ ಪ್ರತಿಷ್ಠಾನ ಹೆಸರಿನ ವಿಶ್ವಸ್ಥದ ಸ್ಥಾಪಕರಾಗಿ ಈ ಪರಿಸರದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಕ್ರಿಯಾಶೀಲತೆಯನ್ನು ರೂಪಿಸುತ್ತಿದ್ದಾರೆ.

Photos

Top

Pallathadka Keshava Bhat Samskarana Function

ಅಗೋಸ್ತು ೧೧ರಂದು ಡಾ| ಪಳ್ಳತ್ತಡ್ಕ ಕೇಶವ ಭಟ್ಟರ
ಸಂಸ್ಮರಣಾ ಕಾರ್ಯಕ್ರಮ

ಅಂತಾರಾಷ್ಟ್ರೀಯ ಸಸ್ಯವಿಜ್ಞಾನಿ ಹಾಗೂ ಸಾತ್ತ್ವಿಕ ಆಹಾರ ಪದ್ಧತಿಯ ಹಾಗೂ ಆರ್ಷೇಯ ರೋಗ ಚಿಕಿತ್ಸಾ ವಿಧಾನಗಳ ಸಶಕ್ತವಕ್ತಾರ ಡಾ| ಪಳ್ಳತ್ತಡ್ಕ ಕೇಶವ ಭಟ್ಟ ಅವರು ೭೨ರ ಹರೆಯದಲ್ಲಿ ತೀರಿಕೊಂಡು ಒಂದು ವರ್ಷವಾಗುತ್ತ ಬಂತು. ಅವರ ನೆನಪಿನ ಕಾರ್ಯಕ್ರಮವೊಂದನ್ನು ಅವರ ಮಗಳಾದ ಡಾ| ಸುಮಾ ಪಿ. ಭಟ್ ಅವರು ಉತ್ಸಾಹ ವಹಿಸಿ ದಿನಾಂಕ ೧೧ ಆಗಸ್ಟ್, ೨೦೧೧ ಗುರುವಾರದಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟದಲ್ಲಿ ಆಯೋಜಿಸಲಾಗಿದೆ.

ಸಂಜೆ ೩.೦೦ ರಿಂದ ೫.೦೦ ಗಂಟೆವರೆಗೆ ಯೋಜಿಸಲಾದ ಕಾರ್ಯಕ್ರಮದಲ್ಲಿ ಚೆನ್ನೈಯ ಸೆಂಟರ್ ಫಾರ್ ಟ್ರೆಡಿಶನಲ್ ಮೆಡಿಸಿನ್ ಎಂಡ್ ರಿಸರ್ಚಿನ ನಿರ್ದೇಶಕರಾದ  ವೈದ್ಯ ಎಸ್. ಉಸ್ಮಾನ್ ಆಲಿ ಅವರು ಪಾರಂಪರಿಕ ವೈದ್ಯಪದ್ಧತಿಯ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಶೇಷ ಉಪನ್ಯಾಸಕ್ಕೆ ಪೋಷಕವಾಗಿ ಔಷಧೀಯ ಸಸ್ಯಗಳ ವರ್ಣಚಿತ್ರಮಾಲಿಕೆ (Slide-show)ಯೂ ನಡೆಯಲಿದೆ. ಇದಲ್ಲದೆ ಇದೇ ಸಂದರ್ಭದಲ್ಲಿ ಡಾ| ಸುಮಾ ಭಟ್ ಅವರು ಸಂಪಾದಿಸಿದ ಸುರುಳಿ ಎಂಬ ನೆನಪಿನ ಗ್ರಂಥದ ಬಿಡುಗಡೆಯೂ ನಡೆಯಲಿದೆ. ಡಾ| ಕೇಶವ ಭಟ್ಟರನ್ನು ಕಂಡು ಅವರೊಡನೆ ಸಂಪರ್ಕ ಹೊಂದಿದ್ದ, ಅವರ ಬಂಧುಗಳ ಆತ್ಮೀಯ ನೆನಪುಗಳ ಸಂಗ್ರಾಹ್ಯಪುಸ್ತಕ ಸುರುಳಿ ಲೋಕಾರ್ಪಣಾ ಕಾರ್ಯಕ್ರಮದ ಅಂಗವಾಗಿ ಡಾ| ಕೇಶವ ಭಟ್ಟರ ಸಾಧನೆ, ಸಿದ್ಧಿಗಳ ಕುರಿತ ಸಾಕ್ಷ್ಯ ಚಿತ್ರವೂ ಈ ಸಂದರ್ಭದಲ್ಲಿ ಪ್ರಕಟಗೊಳ್ಳಲಿದೆ. ಆಸಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾದ ಪ್ರೊ| ಹೆರಂಜೆ ಕೃಷ್ಣ ಭಟ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Top
 
Bhajana Shibira H.K.B Report

Yakshagana @ Dublin - Ireland

The team of artistes of Yakshagana Kendra
will be participating in the Festival of World Cultures
in Dublin – Ireland.
The schedule of the performance of Yakshagana at
People’s Park, Park Road, Dublin

Jatayu Moksha – July 24, 2010 – 1.35 – 2.30 p.m
Hidimba’s Wedding – July 24, 2010, 4.35 – 5.30 p.m.
Jatayu Moksha – July 25, 2010, 2.05 – 3.00 p.m.

For more details about the festival contact :  
Jody  Ackland, Artistic Director
Email – programme@fwc.ie
Website – www.festivalofworldcultures.com

© 2011 - Yakshagana kendra, Site Designed & Maintained by: iSTA Graphics